ಕುಟುಂಬ

 ತಂದೆ ತಾಯಿಯರನ್ನೂ ಅವರ ಮಕ್ಕಳನ್ನೂ ಅನೇಕ ವೇಳೆ ಅವರ ಹತ್ತಿರದ ಬಂಧುಗಳನ್ನೂ ಸೇವಕರನ್ನೂ ಒಳಗೊಂಡ, ವಸತಿ ಭೋಜನಗಳೇ ಮುಂತಾದ ವಿಚಾರಗಳಲ್ಲಿ ಸಹಭಾಗಿಗಳಾಗಿರುವವರ ಒಂದು ಮುಖ್ಯ ಸಾಮಾಜಿಕ ಆರ್ಥಿಕ ಜೈವಿಕ ಘಟಕ (ಫ್ಯಾಮಿಲಿ). ಒಬ್ಬ ಗಂಡಸು, ಒಬ್ಬ ಹೆಂಗಸು ಮತ್ತು ಅವರ ಮಕ್ಕಳು-ಇದು ಆಧುನಿಕ ಕುಟುಂಬದ ಸಾಮಾನ್ಯ ರಚನೆ. ಒಂಟಿಯಾಗಿ ಬಾಳುವುದು ಮಾನವನ ಸ್ವಭಾವವಲ್ಲ. ಹಿಂದಿನಿಂದಲೂ ಅವನು ಸಂಘಜೀವಿ. ಇದಕ್ಕಾಗಿ ಹಲವಾರು ಸಂಬಂಧಗಳನ್ನು ಬೆಳಸಿಕೊಂಡಿದ್ದಾನೆ. ಹಲಬಗೆಯ ಸಹಜ ಪ್ರವೃತ್ತಿಗಳನ್ನು ನಿಯಂತ್ರಿಸುವ ಸಲುವಾಗಿ ಅನೇಕ ಸಾಧನಗಳನ್ನು ಏರ್ಪಡಿಸಿಕೊಂಡಿದ್ದಾನೆ. ಇವೆಲ್ಲ ಸಮಾಜದ ಮನ್ನಣೆ ಪಡೆದಿವೆ. ಈ ಸಾಧನಗಳು ಸಂಪ್ರದಾಯಬದ್ಧವಾಗಿ, ಅನೂಚಾನವಾಗಿ ಒಂದು ತಲೆಮಾರಿನಿಂದ ಇನ್ನೊಂದಕ್ಕೆ ವರ್ಗವಾಗಿ ಸ್ಥಿರವಾಗಿ ಉಳಿದಿವೆ. ಈ ಸಾಧನಗಳೇ ಸಂಸ್ಥೆಗಳು. ಇವು ವ್ಯಕ್ತಿಗಳಿಗೆ ಸಹಾಯಕವಾಗಿ, ಸಮಾಜದಿಂದ ಸಂರಕ್ಷಿತವಾಗಿ ಬೆಳೆದು ಬಂದಿವೆ.

ಕುಟುಂಬ ಒಂದು ಸಂಸ್ಥೆ, ಸಮಾಜರಚನೆಯಲ್ಲಿ ಕುಟುಂಬ ಸಂಸ್ಥೆ ಅತ್ಯಂತ ಚಿಕ್ಕ ಘಟಕವಾದರೂ ಮಹತ್ತ್ವದ ಸ್ಥಾನ ಪಡೆದಿದೆ. ಕುಟುಂಬ ವ್ಯವಸ್ಥೆಯನ್ನು ಸಂಘವೆಂದೂ ಕರೆಯಬಹುದು. ಅದೊಂದು ಚಿಕ್ಕ ಸಮಾಜ; ತಾಯಿ, ತಂದೆ, ಮಕ್ಕಳು, ಬಂಧುಗಳು-ಹೀಗೆ ಒಬ್ಬೊಬ್ಬರಿಗೂ ಸಾಂಘಿಕ ಜೀವನದ ಎಲ್ಲ ಸೌಲಭ್ಯಗಳೂ ಇದರಲ್ಲಿ ದೊರೆಯುತ್ತವೆ. ಅತ್ಯಂತ ಅನಾಗರಿಕ ಜನರಲ್ಲೂ ಕುಟುಂಬದ ಅರಿವು ಮತ್ತು ಸಾಮೂಹಿಕ ಜೀವನಾಭಿಲಾಷೆ ಕಂಡು ಬರುತ್ತದೆ.

 ಕುಟುಂಬ ಮೂಲ ಅಥವಾ ಆರಂಭವನ್ನು ಐತಿಹಾಸಿಕವಾಗಿ ಹುಡುಕುವುದು ಸಾಧ್ಯವಿಲ್ಲ. ಕುಟುಂಬವಿಲ್ಲದ ವ್ಯಕ್ತಿಗಳೇ ಇಲ್ಲ. ವ್ಯಕ್ತಿಗಳಿಲ್ಲದೆ ಕುಟುಂಬವೇ ಇಲ್ಲ. ಮಾನವನೇ ಕುಟುಂಬದ ಮೂಲವಾಗುತ್ತಾನೆ. ವ್ಯಕ್ತಿ ಒಬ್ಬೊಂಟಿಗನಾಗಿ ಇದ್ದಾಗ ಕುಟುಂಬ ಎನಿಸಿಕೊಳ್ಳಲಾರ. ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬದ ಅನಿವಾರ್ಯ ಅಂಗ. ನಾಗರಿಕತೆ ಬೆಳೆಯದಿದ್ದ ಕಾಲದಲ್ಲಿಯೇ ಕುಟುಂಬ ಇತ್ತೆಂಬುದು ಅನೇಕ ಸಂಶೋಧನೆಗಳಿಂದ ವ್ಯಕ್ತಪಟ್ಟಿದೆ. ಅದು ಬಹು ಹಿಂದಿನಿಂದ ಇತ್ತಲ್ಲದೆ ಕಾಲಕಾಲಕ್ಕೆ ಮಾನವ ಸಮಾಜವನ್ನು ರೂಪಿಸುವಲ್ಲಿ, ಮಾರ್ಪಡಿಸುವಲ್ಲಿ ಬಹು ಮುಖ್ಯ ಪಾತ್ರವನ್ನೂ ವಹಿಸುತ್ತ ಬಂದಿತ್ತು.

 ಸಮಾಜದಲ್ಲಿ ಅನೇಕಾನೇಕ ಚಟುವಟಿಕೆಗಳು ಹುಟ್ಟಿರುವುದೂ ಮಾನವನ ಕುಟುಂಬದಿಂದ ಮಾತ್ರವೇ ಎನ್ನುವುದು ದೃಢಪಟ್ಟಿರುವ ಸಂಗತಿಯಾಗಿದೆ. ಜಾತಿ ಪದ್ಧತಿಗಳೂ ಬಡತನ ಸಿರಿತನಗಳೂ ಬಂಧು ಬಳಗವೂ ಸ್ನೇಹಿತ ಮತ್ತು ಶತ್ರುಗಳೂ ಧಣಿ ಮತ್ತು ಸೇವಕರೂ ನೆರೆಹೊರೆ ಮತ್ತು ಸಹೋದ್ಯೋಗಿ ಭಾವನೆಗಳೂ ಕುಟುಂಬದಿಂದ ಉದ್ಭವಿಸುವ, ಕುಟುಂಬಕ್ಕೆ ಅಂಟಿಕೊಂಡಿರುವ, ಜೀವನ ಯಾತ್ರೆಗೇ ಸಂಬಂಧಪಟ್ಟ ಅಂಶಗಳಾಗಿವೆ. ಜೀವನದ ಅತಿ ಮುಖ್ಯ ಉದ್ಯಮಗಳಾದ ಕೃಷಿ, ವ್ಯಾಪಾರ, ಕೈಗಾರಿಕೆ ಮುಂತಾದವೂ ಕುಟುಂಬ ಜೀವನದಿಂದ ಉದ್ಭವಿಸಿವೆ. ಆಸ್ತಿ ಪಾಸ್ತಿಗಳೂ, ಅಂದರೆ ಕಮ್ಮಾರಿಕೆ, ವ್ಯಾಪಾರ, ಬಡಗಿತನ, ಮಡಿವಾಳ ತನ, ಹಜಾಮಕಸಬು, ಯೋಧಜೀವನ, ಕುಂಬಾರಿಕೆ-ಮೊದಲಾದವು ಕುಟುಂಬ ಜೀವನದ ಧ್ಯೇಯವನ್ನು ಸಾಧಿಸುವ ಅಂಶಗಳಾಗಿವೆ. ಕುಟುಂಬ ವ್ಯಕ್ತಿ ಸಂಬಂಧವನ್ನು ಬಾಂಧವ್ಯದ ರೀತಿಯಲ್ಲಿ ರೂಪುಗೊಳಿಸಿದೆ. ಅಮ್ಮ, ಅಪ್ಪ, ಅಣ್ಣ, ತಮ್ಮ, ಅಕ್ಕ, ತಂಗಿ, ಅತ್ತಿಗೆ, ನಾದಿನಿ, ಸೋದರತ್ತೆ, ಸೋದರಮಾವನೆಂಬ ಬಾಂಧವ್ಯಗಳನ್ನು ಕಲ್ಪಿಸಿ, ಪರಸ್ಪರ ಸಮ್ಮಿಳನಕ್ಕೆ ತಳಹದಿ ಹಾಕಿ, ಜೀವನದ ಘರ್ಷಣೆಗಳಿಗೆ ಹೆಚ್ಚು ಅವಕಾಶವನ್ನುಂಟುಮಾಡದೆ ವ್ಯಕ್ತಿವ್ಯಕ್ತಿಗೂ ಪರಸ್ಪರ ಸಂಬಂಧವನ್ನು ಕಲ್ಪಿಸಿ ಸಮಾಜ ಭದ್ರತೆಗೆ ಅಡಿಪಾಯವಾಗಿದೆ. ಮನುಷ್ಯನ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಸಾಧನೆಗಳಗೆ ಅತಿ ಸಹಾಯಕವಾಗಿರುವ ಸಂಸ್ಥೆಯೆಂದರೆ ಕುಟುಂಬ ಒಂದೇ. ಪೂಜೆಪುನಸ್ಕಾರ, ತೀರ್ಥಯಾತ್ರೆ, ವ್ರತನೇಮ ಮೊದಲಾದ ಮತಾಚಾರಗಳನ್ನು ಮಾನವ ಸಮಾಜದಲ್ಲಿ ಉಳಿಸಿ ಬೆಳೆಸಿರುವುದೂ ಇದೇ.

 ಇಷ್ಟು ಪ್ರಾಮುಖ್ಯ ಪಡೆದಿರುವ ಕುಟುಂಬ ಸಂಸ್ಥೆಯನ್ನು ಸಮಾಜಶಾಸ್ತ್ರಜ್ಞರು ಶಾಶ್ತ್ರೋಕ್ತವಾಗಿ ಸ್ಪಷ್ಟಗೊಳಿಸಲು ಪ್ರಯತ್ನಿಸಿದ್ದಾರೆ. ರಕ್ತಸಂಬಂಧಕ್ಕೊಳಪಟ್ಟ ಜನ ಒಂದು ಕುಟುಂಬಕ್ಕೆ ಸೇರಿದವರೆಂದೂ ಗಂಡ ಹೆಂಡತಿ, ತಾಯಿ, ತಂದೆ, ಅಣ್ಣ ತಂಗಿ, ಪುತ್ರ ಪುತ್ರಿ ಮೊದಲಾದ ಸಂಬಂಧಗಳನ್ನು ಹೊಂದಿ ಒಂದೇ ತೆರನಾದ ಸಂಸ್ಕøತಿಯನ್ನು ವಂಶಪಾರಂಪರ್ಯವಾಗಿ ಬೆಳೆಸಿಕೊಂಡು ಬರುವ ಸಂಸ್ಥೆ ಕುಟುಂಬವೆಂದೂ ಬರ್ಜಸ್ ಮತ್ತು ಲಾಕರ ಅಭಿಪ್ರಾಯ. ಕುಟುಂಬ ಲೈಂಗಿಕ ಜೀವನವನ್ನು ಕ್ರಮಬದ್ಧವಾಗಿ ಮಾಡಿ, ಮಕ್ಕಳನ್ನು ಬೆಳೆಸಿ, ಅವರನ್ನು ಸುಸಂಸ್ಕøತರನ್ನಾಗಿ ಮಾಡಿ ಮಾನವನ ವಂಶಪಾರಂಪರ್ಯವನ್ನು ಬೆಳೆಯಿಸಿಕೊಂಡು ಬರುವ ಒಂದು ಸಂಸ್ಥೆಯೆಂಬುದು ಮೆಕೈವರ್ ಮತ್ತು ಪೇಜರ ಅಭಿಪ್ರಾಯ. ಶಾಸ್ತ್ರೋಕ್ತವಾಗಿ ಸ್ಪಷ್ಟಪಡಿಸಿರುವ ಅಭಿಪ್ರಾಯಗಳಲ್ಲಿ ಮೇಲ್ಕಂಡಿಸಿರುವ ಎರಡು ಅಭಿಪ್ರಾಯಗಳೂ ಬೆಲೆಯುಳ್ಳವು. ಈ ಅಭಿಪ್ರಾಯಗಳನ್ನು ಪರಿಶೀಲಿಸಿದರೆ, ಕೆಳಗೆ ಕಂಡ ಅಂಶಗಳು ಹೊರಬೀಳುತ್ತವೆ;

 1. ಕುಟುಂಬ ಲೈಂಗಿಕ ಜೀವನವನ್ನು ಕ್ರಮಬದ್ಧಗೊಳಿಸಿ, ಅದರಿಂದುಂಟಾದ ಸಂತಾನ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಲು ಸೂಕ್ತ ಏರ್ಪಾಡನ್ನು ಮಾಡುತ್ತದೆ. 2. ದಾಂಪತ್ಯ ಜೀವನವನ್ನು ಸುಗಮವಾಗಿ ನಡೆಸಿಕೊಂಡು ಬರಲು ತಳಹದಿಯನ್ನು ಹಾಕಿಕೊಡುತ್ತದೆ. 3. ಜೀವನವನ್ನು ಸುಗಮವಾಗಿ ನಡೆಸಲು ಅಗತ್ಯವಾದ ಆಸ್ತಿ ಪಾಸ್ತಿಗಳ ಆವಶ್ಯಕತೆಯ ಅಂಶವನ್ನು ಒತ್ತಿ ಹೇಳುತ್ತದೆ. 4. ಸಾಮೂಹಿಕ ಜೀವನಕ್ಕೆ ಕುಟುಂಬವೇ ಆಧಾರ ಸ್ತಂಭವೆಂದು ದೃಢೀಕರಿಸುತ್ತದೆ. 5. ಸಂಸಾರದ ವ್ಯಕ್ತಿಗಳೆಲ್ಲರೂ ಒಂದೇ ಕಡೆ ಒಟ್ಟಿಗೆ ಸೇರಿ ಬಾಳುವುದರಿಂದ ಮನುಷ್ಯನ ಕುಹಕ ನೀತಿಯನ್ನು ಹೊರದೂಡಲು ಸಹಾಯವಾಗುತ್ತದೆ. ಈ ಅಂಶಗಳನ್ನು ಸಮಾಜಶಾಸ್ತ್ರಜ್ಞರು ಕುಟುಂಬದ ಮುಖ್ಯ ಲಕ್ಷಣಗಳೆಂದೂ ಹೇಳಿದ್ದಾರೆ.

 ಸತಿಪತಿಗಳೊಡಗೂಡಿ ಸಾಂಗವಾಗಿ ನಡೆಸುವ ದಾಂಪತ್ಯಜೀವನ, ಸಂತಾನ ವಾತ್ಸಲ್ಯ, ಪಿತೃ ಮತ್ತು ಪುತ್ರವಾತ್ಸಲ್ಯ ಮತ್ತು ಅವರ ಪೋಷಣೆ ಕುಟುಂಬ ಜೀವನದ ಮೂಲಭೂತ ಬಾಧ್ಯತೆಗಳು. ಕುಟುಂಬ ಗಂಡಹೆಂಡಿರ ಆಕರ್ಷಣೆಗೂ ಪರಸ್ಪರ ಸಮ್ಮಿಳನಕ್ಕೂ ಸಹಜೀವನಕ್ಕೂ ಅಂಥ ಜೀವನದಿಂದ ಒದಗುವ ದೈಹಿಕ ಮತ್ತು ಮಾನಸಿಕ ತೃಪ್ತಿಗೂ ಆಧಾರವಾಗಿದೆ.

 ಪ್ರಾಚೀನ ಮಾನವ ಅವ್ಯವಸ್ಥಿತ ಲೈಂಗಿಕ ಜೀವನವನ್ನವಲಂಬಿಸಿದ್ದನೆಂದೂ ಅಕ್ಕತಂಗಿಯರೆಂಬ ಭೇದಭಾವವಿಲ್ಲದೆ ಸಂಭೋಗವನ್ನು ನಡೆಸಿ, ಹುಟ್ಟಿದ ಸಂತಾನಕ್ಕೆ ತಾನು ಹೊಣೆಗಾರನಾದೆ ಸ್ವೇಚ್ಛೆಯಿಂದ ವರ್ತಿಸುತ್ತಿದ್ದನೆಂದೂ ಪ್ರಾಣಿಗಳಂತೆ ಲೈಂಗಿಕ ಜೀವನವನ್ನು ನಡೆಸುತ್ತಿದ್ದನೆಂದೂ ಒಂದು ವಾದವಿದೆ. ಮಾನವಶಾಸ್ತ್ರಜ್ಞರು ಇಂಥ ವಾದ ನಿರಾಧಾರವೆಂದಿದ್ದಾರೆ. ಆದಿಯಿಂದ ಮಾನವ ಸಾಮಾಜಿಕ ಸಂಪ್ರದಾಯಗಳನ್ನೂ ಕಟ್ಟಳೆಗಳನ್ನೂ ಬೆಳೆಸಿಕೊಂಡು ಬಂದಿದ್ದಾನೆ. ತನ್ನ ಜೀವನ ಸಾಂಗವಾಗಿ ನಡೆಯಲೂ ಸಂತಾನ ಸುರಕ್ಷಿತವಾಗಿರಲೂ ಅನೇಕ ಕಾಯಿದೆ ಕಟ್ಟಳೆಗಳನ್ನು ವಿಧಿಸಿಕೊಂಡು ಅವಕ್ಕೆ ಅನುಗುಣವಾಗಿ ನಡೆದುಕೊಂಡು, ತನ್ನ ಸುಖವನ್ನೂ ತನ್ನ ಸಂತಾನದ ರಕ್ಷಣೆಯನ್ನೂ ಭದ್ರಗೊಳಿಸಿಕೊಂಡು ಬಂದಿದ್ದಾನೆ. ಇದು ಒಂದೇ ದಿನಕ್ಕೆ ಆದಂಥದಲ್ಲ. ಶತಮಾನಗಟ್ಟಲೆ ಅನುಭವ ತನಗೆ ಕಲಿಸಿದ ಪಾಠದಿಂದ ಮಾನವ ತನ್ನ ಜೀವನದ ರೀತಿ ನೀತಿಗಳನ್ನು ಮಾರ್ಪಡಿಸಿಕೊಳ್ಳುತ್ತ ಬಂದಿದ್ದಾನೆ. ಸರಿಯೆಂದು ರುಜುವಾತಾದ ಕಟ್ಟಳೆಗಳಿಗೆ ತಲೆಬಾಗಿದ್ದಾನೆ, ಕಾಯಿದೆ ಕಟ್ಟಳೆಗಳನ್ನು ಮೀರಿದವರಿಗೆ ಉಗ್ರ ಶಿಕ್ಷೆಗಳನ್ನೂ ಕೆಲವು ಬಾರಿ ಮರಣದಂಡನೆಯನ್ನೂ ಆತ ವಿಧಿಸಿರುವ ನಿದರ್ಶನಗಳನ್ನೂ ಕಾಣಬಹುದು. ಇದೂ ಅಲ್ಲದೆ ಲೈಂಗಿಕ ಜೀವನದ ಕಟ್ಟಳೆಗಳನ್ನು ಮೀರಿದವರಿಗಂತೂ ಊಹಿಸಲಾರದಂಥ ಕಠಿಣ ಶಿಕ್ಷೆಗಳನ್ನು ಕೊಡುವುದು ಒಂದು ಕಾಲದಲ್ಲಿ ವಾಡಿಕೆಯಲ್ಲಿತ್ತು. ಈ ಕಾಯಿದೆ ಕಟ್ಟಳೆಗಳನ್ನೂ ಅವುಗಳ ಉಲ್ಲಂಘನೆಗಾಗುತ್ತಿದ್ದ ಪರಿಣಾಮಗಳನ್ನೂ ಪರಿಶೀಲಿಸಿ ನೋಡಿದರೆ ಲೈಂಗಿಕ ಜೀವನದ ಅವ್ಯವಸ್ಥೆ ನಿರಾಧಾರವೆಂದು ಕಂಡುಬರುತ್ತದೆ.

 ಲೈಂಗಿಕ ಜೀವನ ಅವ್ಯವಸ್ಥಿತವಾಗಿದ್ದಿತೆಂದು ಹೇಳಲು ಕೆಲವರು ಹಲವಾರು ಕಾರಣಗಳನ್ನೊದಗಿಸುತ್ತಾರೆ. ಪ್ರಾಚೀನ ಕುಟುಂಬ ಜೀವನದ ಆದಿಯಲ್ಲಿ ಬಹುಪತಿ ಮತ್ತು ಬಹುಪತ್ನೀ ವಿವಾಹಗಳೂ ಸರ್ವೇಸಾಮಾನ್ಯವಾಗಿ ರೂಢಿಯಲ್ಲಿದ್ದುವು. ಅಲ್ಲದೆ ಆಪ್ತರಿಗೂ ಅತಿಥಿಗಳಿಗೂ ಪತ್ನಿಯರನ್ನೊಪ್ಪಿಸುವುದು ಒಂದು ದೊಡ್ಡ ಗೌರವವೆಂದು ನಂಬಿ ಅದನ್ನು ಅನೇಕ ಗುಂಪುಗಳಲ್ಲಿ ಜಾರಿಗೆ ತಂದಿದ್ದರು. ಜೊತೆಗೆ ಒಂದು ಗುಂಪಿನ ಗಂಡಸರೆಲ್ಲರೂ ಇನ್ನೊಂದು ಗುಂಪಿನ ಹೆಂಗಸರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದರು. ಆದರೆ ಬಹುಪತ್ನೀ ವಿವಾಹಗಳಲ್ಲಿ ಸರ್ವೇಸಾಧಾರಣವಾಗಿ ಸಮಾಜದಲ್ಲಿ ಗಣ್ಯಸ್ಥಾನವನ್ನು ಪಡೆದಿದ್ದ ಸಂಸಾರಗಳಲ್ಲಿ ಮತ್ತು ಹೆಚ್ಚಿಗೆ ಆಸ್ತಿಪಾಸ್ತಿಗಳನ್ನು ಗಳಿಸಿದ್ದ ಕುಟುಂಬಗಳಲ್ಲಿ ಮಾತ್ರ ರೂಢಿಯಲ್ಲಿದ್ದುವು. ಬೇರೆ ಗುಂಪುಗಳು ಈ ತೆರನಾದ ವಿವಾಹಗಳನ್ನು ರೂಢಿಮಾಡಿಕೊಳ್ಳುವುದು ಕಠಿಣವಾಗುತ್ತಿತ್ತು. ಬಹುಪತಿ ವಿವಾಹ ಪದ್ಧತಿ ಗಂಡಸರ ಸಂಖ್ಯೆ ಕಡಿಮೆಯಾದ ಗುಂಪಿನವರಲ್ಲಿ ಮಾತ್ರ ವಾಡಿಕೆಯಲ್ಲಿತ್ತು. ಹೆಂಡತಿಯನ್ನು ಬೇರೆಯವರಿಗೊಪ್ಪಿಸುವುದು ಅಸಂಖ್ಯಾತ ಹೆಂಡತಿಯರನ್ನು ಮದುವೆಯಾದ ಕೆಲವೇ ಗುಂಪುಗಳಲ್ಲಿ, ಅಂದರೆ ಹೇರಳವಾದ ಆಸ್ತಿ ಪಾಸ್ತಿಗಳನ್ನಿಟ್ಟುಕೊಂಡಿದ್ದ ಶ್ರೀಮಂತ ಗುಂಪುಗಳಲ್ಲಿ, ವಾಡಿಕೆಯಲ್ಲಿತ್ತು. ಇವುಗಳ ಜೊತೆಗೆ ಸಾರೊರೇಟ್ ಮತ್ತು ಲೆವಿರೇಟ್ ಪದ್ಧತಿಗಳನ್ನು ಆಚರಣೆಯಲ್ಲಿಟ್ಟುಕೊಂಡಿದ್ದ ಹಲವಾರು ಗುಂಪುಗಳಲ್ಲೂ ಈ ಪದ್ಧತಿ ರೂಢಿಯಲ್ಲಿತ್ತು. ಸಾರೊರೇಟ್ ಪದ್ಧತಿಯ ಪ್ರಕಾರ ಒಂದು ಗುಂಪಿನ ಒಬ್ಬ ಗಂಡು ಇನ್ನೊಂದು ಗುಂಪಿನ ಒಬ್ಬ ಹೆಣ್ಣನ್ನು ಮದುವೆಯಾದರೆ ಆ ಹೆಣ್ಣಿನ ತಂಗಿಯರನ್ನೆಲ್ಲ ಆ ಗಂಡು ಮದುವೆಯಾಗುವ ಹಕ್ಕುಪಡೆಯುತ್ತಿದ್ದ. ಲೆವಿರೇಟ್ ಪದ್ಧತಿಯ ಪ್ರಕಾರ ಮದುವೆಯಾದ ಹೆಣ್ಣು ವಿಧವೆಯಾದರೆ ತನ್ನ ಗಂಡನ ಅಣ್ಣತಮ್ಮಂದಿರನ್ನು ಮದುವೆಯಾಗುವ ಹಕ್ಕನ್ನು ಪಡೆಯುತ್ತಿದ್ದಳು. ನಿಜವಾಗಿ ನೋಡಿದರೆ ಸಾರೊರೇಟ್ ಪದ್ಧತಿಯ ಪ್ರಕಾರ, ಒಂದು ಕುಟುಂಬದ ಗಂಡಸರೆಲ್ಲರಿಗೂ ಮದುವೆಯಾಗುವುದು ಅಸಂಭವವಾಗಿ ಕಂಡುಬಂದಾಗ ಮಾತ್ರ ಗಂಡನ ಅನುಮತಿಯಿಂದ ಹೆಂಡತಿ ಗಂಡನ ಒಡಹುಟ್ಟಿದವರಲ್ಲಿ ಸಂಭೋಗ ಮಾಡುವ ಪದ್ಧತಿಯಿತ್ತು. ಹೀಗೆ ಲೈಂಗಿಕ ಜೀವನದಲ್ಲಿ ಅನೇಕ ಕಟ್ಟುಪಾಡುಗಳು ಅಲ್ಲಲ್ಲಿ ಆಚರಣೆಯಲ್ಲಿದ್ದುವಾದರೂ ಅವು ಕುಟುಂಬಜೀವನಕ್ಕೆ ಕೇವಲ ಅಪವಾದ ಮಾತ್ರವಾಗಿದ್ದುವೆಂಬುದನ್ನು ಮರೆಯಲಾಗದು.

 ಮಾನವಶಾಸ್ತ್ರಜ್ಞರ ಪ್ರಕಾರ ಕುಟುಂಬದಲ್ಲಿ ಪಿತೃಪ್ರಧಾನ ಕುಟುಂಬ ಮತ್ತು ಮಾತೃಪ್ರಧಾನ ಕುಟುಂಬ ಎಂಬೆರಡು ಬಗೆಗಳಿವೆ. ಈ ಎರಡೂ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿವೆ.

 ಮಾತೃಪ್ರಧಾನ ಕುಟುಂಬದಲ್ಲಿ ಸ್ತ್ರೀಗೆ ಹೆಚ್ಚಿನ ಪ್ರಾಧಾನ್ಯ, ಮನೆಯ ಯಜಮಾನಿಕೆ ತಂದೆಯದಲ್ಲ. ತಾಯಿಯದು. ಆಕೆಯೇ ಆಸ್ತಿಪಾಸ್ತಿಗಳಿಗೆಲ್ಲ ಒಡೆಯಳಾಗಿರುತ್ತಾಳೆ. ಕುಟುಂಬದಲ್ಲಿ ಏನು ಕಾರ್ಯವಾಗಬೇಕಾದರೂ ತಾಯಿಯ ಮಾತಿಲ್ಲದೆ ಆಗುವಂತಿಲ್ಲ. ಮದುವೆಯಾದ ಗಂಡನೂ ಹೆಂಡತಿಯ ಮನೆಗೆ ಬಂದು ವಾಸಿಸುವುದು ರೂಢಿ. ಹುಟ್ಟಿದ ಮಕ್ಕಳೆಲ್ಲರೂ ತಾಯಿಯ ಮನೆಗೆ ಸೇರಿರುತ್ತಾರೆ. ಆಸ್ತಿ ಹಕ್ಕೆಲ್ಲವೂ ಹೆಣ್ಣುಮಕ್ಕಳಿಗೇ ಸೇರಿರುತ್ತದೆ. ಗಂಡಸಿಗೆ ಪ್ರಾಧಾನ್ಯ ತೀರ ಕಡಿಮೆ. ಉದಾಹರಣೆಗೆ, ಪುಯಿಬ್ಲೂ ಜನರಲ್ಲಿ ಮದುವೆಯಾದ ಮೇಲೆ ಹೆಣ್ಣು ತಾಯಿಯ ಮನೆಯಲ್ಲಿಯೇ ಇರುತ್ತಾಳೆ. ತಾಯಿಯ ಮನೆಯ ಆಸ್ತಿಗೂ ಆಕೆಗೆ ಹಕ್ಕುಂಟು. ತನ್ನ ಪುರೋಭಿವೃದ್ಧಿ ತನ್ನ ತಾಯಿಯ ಮನೆಯಲ್ಲಿಯೇ ಎಂದು ಆಕೆ ಮನದಟ್ಟುಮಾಡಿಕೊಂಡು ತಾಯಿಯ ಬಳಗದ ಕಡೆಗೇ ಹೆಚ್ಚು ಅಭಿಮಾನ ತೋರುತ್ತಾಳೆ; ತಾಯಿಯ ತಂಗಿಯರು, ಅಕ್ಕಂದಿರು, ಅಣ್ಣಂದಿರು ಮತ್ತು ತಮ್ಮಂದಿರು ಏಳಿಗೆಗೇ ಹೆಚ್ಚು ಗಮನ ಕೊಡುತ್ತಾಳೆ, ಗಂಡನ ಸ್ಥಿತಿ ತದ್ವಿರುದ್ಧ. ಆತ ತಾನು ಅತ್ತೆಯ ಮನೆಯಲ್ಲಿದ್ದೇನೆಂದೂ ಆ ಕುಟುಂಬದಲ್ಲಿ ತನಗೆ ಯಾವ ಹಕ್ಕುಗಳೂ ಇಲ್ಲವೆಂದೂ ತನಗೆ ಹುಟ್ಟಿದ ಮಕ್ಕಳು ತನ್ನ ಮೇಲೆ ಅವಲಂಬಿಗಳಾಗಿರುವುದಿಲ್ಲವೆಂದೂ ಅತ್ತೆಯ ಮನೆಯಲ್ಲಿ ತನ್ನ ಸ್ಥಾನ ಸುಭದ್ರವಲ್ಲವೆಂದೂ ತನ್ನ ಮಕ್ಕಳು ತನಗಿಂತ ತನ್ನ ಅತ್ತೆಯ ಮಕ್ಕಳನ್ನು ಹೆಚ್ಚಾಗಿ ಅವಲಂಬಿಸುತ್ತವೆಯೆಂದೂ ಅಕಸ್ಮಾತ್ತಾಗಿ ಹೆಂಡತಿಯೇನಾದರೂ ತನ್ನನ್ನು ಹೊರದೂಡಿದರೆ ಮಕ್ಕಳುಮರಿಯೆಲ್ಲವನ್ನೂ ಬಿಟ್ಟು ತಾನು ತನ್ನ ತಾಯಿಯ ಮನೆಗೆ ಹಿಂದಿರುಗಬೇಕಾಗುವ ಸಂಭವವೇ ಹೆಚ್ಚೆಂದೂ ಆತ ತಿಳಿದಿರುತ್ತಾನೆ. ಸ್ತ್ರೀಗೆ 
ಪ್ರಾಧಾನ್ಯವಿರುವ ನಿದರ್ಶನಗಳನ್ನು ಇರಕಾಯ್, ಹುರಾನ್, ಜಿರಾಕೆ, ಮಿನಿಟೌರಿ ಮೊದಲಾದ ಅಮೆರಿಕದ ಪ್ರಾಚೀನ ಕುಟುಂಬಗಳಲ್ಲೂ ಖಾಸಿ ಜನಾಂಗದಲ್ಲೂ ಭಾರತದಲ್ಲಿ ಮಲಯಾಳಿಗಳಲ್ಲೂ ಕಾಣಬಹುದು.

 ಪಿತೃಪ್ರಭುತ್ವ ಕುಟುಂಬಗಳಿಗೂ ಸಾಕಷ್ಟು ಪ್ರಾಚೀನ ಇತಿಹಾಸವಿದೆ. ಇಂಥ ಕುಟುಂಬದಲ್ಲಿ ಗಂಡಸಿಗೇ ಹೆಚ್ಚಿನ ಪ್ರಾಧಾನ್ಯ, ಆಸ್ತಿಯ ಹಕ್ಕು, ಶಾಸ್ತ್ರ ಮಾಡಿಸುವಿಕೆ, ಮನೆಯ ಯಜಮಾನಿಕೆ, ಮದುವೆ, ಮುಂಜಿಗಳಲ್ಲಿ ಪ್ರಾಧಾನ್ಯ ಗಂಡಸಿಗೇ ಸೇರಿದ್ದು. ಮದುವೆಯಾದ ಮೇಲೆ ಹೆಂಡತಿ ಗಂಡನ ಮನೆಗೆ ಹೋಗಿ ಸಂಸಾರ ನಡೆಸಬೇಕು. ಆಕೆ ಗಂಡನ ಮನೆಗೇ ಸೇರಿಹೋಗುತ್ತಾಳೆ. ಪೂಜೆ ಪುನಸ್ಕಾರಗಳಲ್ಲಿ ಗಂಡನನ್ನೇ ಹಿಂಬಾಲಿಸುತ್ತಾಳೆ. ಹುಟ್ಟಿದ ಮಕ್ಕಳೆಲ್ಲರೂ ಗಂಡನ ಮನೆತನಕ್ಕೆ ಸೇರುತ್ತಾರೆ. ಆಸ್ತಿಪಾಸ್ತಿಗಳ ಹಕ್ಕು ಗಂಡುಮಕ್ಕಳಿಗೇ ಅಧಿಕವಾಗಿರುತ್ತದೆ. ಇದೂ ಅಲ್ಲದೆ ಗಂಡು ಕೆಚ್ಚೆದೆಯಿಂದ ಇತರರ ಹಂಗಿಲ್ಲದೆ ತನ್ನ ದಿನಚರಿಯ ಕೆಲಸಕಾರ್ಯಗಳನ್ನು ನಿರ್ವಹಿಸಿಕೊಂಡು ಬಾಳುವ ದಿಟ್ಟತನವನ್ನು ಸಂಪಾದಿಸಿಕೊಳ್ಳುತ್ತಾನೆ. ಆದರೆ ಆತನ ಹೆಂಡತಿ ತನ್ನ ಆಪ್ತರನ್ನೂ ಬಂಧುಬಳಗವನ್ನೂ ಬಿಟ್ಟು ಗಂಡನೊಡಗೂಡಿ, ಗಂಡನ ಜನಗಳೊಂದಿಗೆ ತವರಿನ ಕಡೆಗೇ ಹಂಬಲ ಹೆಚ್ಚುವುದು. ಅದು ಕಾಲಕ್ರಮೇಣ ಕಡಿಮೆಯಾಗಿ ಗಂಡನ ಮನೆಯೇ ತನ್ನ ಮನೆಯೆಂದು ಪರಿಗಣಿಸಲು ಸಾಧ್ಯವಾದೀತು. ಪಿತೃಪ್ರಭುತ್ವವಿರುವ ಕುಟುಂಬಗಳು ಆಧುನಿಕ ಕಾಲದಲ್ಲಿಯೂ ತಮ್ಮ ಪ್ರಾಧಾನ್ಯ ಕಳೆದುಕೊಂಡಿಲ್ಲ. ಸಮಾಜ ಉದ್ಭವಿಸಿದ ಆದಿಯಿಂದಲೂ ಗಂಡಸು ದೃಢಕಾಯನಾಗಿಯೂ ಧೀರನಾಗಿಯೂ ಬಾಳಿ ಆಸ್ತಿಪಾಸ್ತಿಗಳನ್ನು ಮಾಡಿ ತನ್ನ ಬಂಧುಬಳಗವನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬರಲು ಇರಬಹುದಾದ ಅನೇಕ ಎರಡುತೊಡರುಗಳನ್ನು ಲೆಕ್ಕಿಸದೆ, ಶತ್ರುಗಳನ್ನು ಹಿಮ್ಮೆಟ್ಟಿಸಿ ಅಥವಾ ಧ್ವಂಸಮಾಡಿ ತನ್ನ ಪೀಳಿಗೆಯನ್ನು ಕಾಪಾಡಿಕೊಂಡು ಬಂದು ತನ್ನನ್ನು ಆಶ್ರಯಿಸಿದ ಹೆಣ್ಣು ಪೀಳಿಗೆಯನ್ನೂ ಸಂರಕ್ಷಿಸಿಕೊಂಡು ಬಂದಿದ್ದಾನೆ. ಕುಟುಂಬ ಆರ್ಥಿಕ ಸ್ಥಿತಿಗತಿಗಳಿಗೆ ಪುರುಷನೇ ಕಾರಣನೆನಿಸಿಕೊಂಡು ಭಯಭೀತಿಗಳಿಲ್ಲದೆ ಹೋರಾಡಿ ಕುಟುಂಬಸಂರಕ್ಷಣೆಯನ್ನು ಮಾಡಿಕೊಂಡು ಬಂದಿದ್ದಾನೆ. ಸ್ತ್ರೀಯಾದರೋ ಮನೆಯಲ್ಲಿದ್ದುಕೊಂಡು ಅವನಿಗೆ ಸಹಾಯಕಳಾಗಿ ಸಂತಾನವನ್ನು ಪಡೆದು ಅದನ್ನು ಸಂರಕ್ಷಿಸಿಕೊಂಡು ಬಂದಿದ್ದಾಳೆ. ಈ ದೆಶೆಯಿಂದಾಗಿ ಪಿತೃಮೂಲ ಕುಟುಂಬಗಳೇ ಸ್ತ್ರೀಮೂಲ ಕುಟುಂಬಗಳಿಗಿಂತ ಜನಪ್ರಿಯವಾದುವು. ಇದನ್ನು ಮನಗಂಡ ಮೆಕೈವರ್ ಈ ರೀತಿ ನುಡಿದಿದ್ದಾನೆ; 'ಸಮಾಜದಲ್ಲಿ ಆಸ್ತಿ ಪಾಸ್ತಿಗಳಿಗಿರುವ ಮೌಲ್ಯಗಳೂ ವ್ಯವಸಾಯೋತ್ಪಾದನೆಯೂ ಅದರ ಬೆಳೆವಣಿಗೆಗೆ ಸಂಬಂಧಪಟ್ಟ ಸಕಲ ಸೌಲಭ್ಯಗಳೂ ಆಡಳಿತ ವ್ಯವಸ್ಥೆಯೂ ಕಾರ್ಯನಿಪುಣತೆಯೂ ಕಾರ್ಯಚಟುವಟಿಕೆಗಳೂ ಆಧುನಿಕ ಸಮಾಜದಲ್ಲಿ ನೈಪುಣ್ಯ ಪಡೆದಿರುವ ಸಕಲ ಕಸಬುಗಳೂ ಪಿತೃಪ್ರಾಧಾನವುಳ್ಳ ಕುಟುಂಬದಿಂದ ಉದ್ಭವಿಸಿವೆ. ಇದರ ಜೊತೆಗೆ ಪಿತೃಪ್ರಾಧಾನವುಳ್ಳ ಕುಟುಂಬದ ದೆಶೆಯಿಂದ ಜನಗಳ ಒಕ್ಕೂಟವೂ ಒಗ್ಗಟ್ಟೂ ಹೆಚ್ಚಾಗಿ ಮಾನವ ಸಮಾಜದ ಭದ್ರತೆಗೆ ಕಾರಣವಾಗಿದೆಯೆಂದೂ ಪ್ರತಿಯೊಬ್ಬ ಮಾನವನೂ ತನ್ನ ಸಹೋದ್ಯೋಗಿಗಳೊಂದಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಶಕ್ತಿಸಾಮಥ್ರ್ಯಗಳನ್ನೊಳಗೊಂಡವನಾಗಿ ತನ್ನ ರಕ್ತಸಂಬಂಧಿಗಳ ನಡವಳಿಕೆಗಳನ್ನು ಭದ್ರಗೊಳಿಸಲು ಪಿತೃಪ್ರಾಧಾನ್ಯ ಕುಟುಂಬ ನೆರವಾಗಿದೆಯೆಂದೂ ನವೀನ ಸಮಾಜದ ಭದ್ರತೆಗೆ, ಪುರುಷತ್ವಕ್ಕೆ ತಕ್ಕ ಮನ್ನಣೆಯನ್ನು ಕೊಟ್ಟು ಮಾನವ ಪೀಳಿಗೆಯ ಸರ್ವೋದ್ಧಾರಕ್ಕೆ ಕಾರಣವಾಗಿದೆಯೆಂದೂ ತಿಳಿಯಲಾಗಿದೆ.

 ಪಿತೃಪ್ರಧಾನ ಕುಟುಂಬಗಳಲ್ಲಿ ಸ್ತ್ರೀಯ ಸ್ಥಾನಮಾನಗಳು ಸುಭದ್ರವಾಗಿ ಕಂಡುಬರದೆ ಪುರುಷನ ಸ್ಥಾನಮಾನಗಳಿಗಿಂತ ಕೆಳಮಟ್ಟದಲ್ಲಿಯೇ ಇರುತ್ತವೆ. ಕಾನೂನನ್ನು ಒಕ್ಕಣಿಸುವಾಗಲೂ ಇದೇ ಮೇಲ್ಪಂಕ್ತಿಯನ್ನು ಅನುಸರಿಸಿರುವ ಸಂದರ್ಭಗಳು ಅನೇಕ ಬಾರಿ ಉದ್ಭವಿಸಿವೆ. ಇಂಥ ಪರಿಸ್ಥಿತಿ ಭಾರತದಲ್ಲಿ ಬಹುಕಾಲದಿಂದ ರೂಢಿಯಲ್ಲಿದೆ. ಬಹುಕಾಲ ಹೆಂಗಸರನ್ನು ಗಂಡಸರಿಗೆ ಸಮಾನರೆಂದು ಜನತೆ ಭಾವಿಸಿರಲಿಲ್ಲ. ಸಮಾನ ಹಕ್ಕುಗಳೂ ಅವರಿಗೆ ಇರಲಿಲ್ಲ. ಈಗೀನ ಈ ಭಾವನೆಗಳು ಕಡಿಮೆಯಾಗುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುನ್ನುಗ್ಗಿ ಸಮಾನತೆಯ ಹಕ್ಕನ್ನು ಪಡೆಯುತ್ತಿದ್ದಾರೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲುಂಟಾದ ಚಟುವಟಿಕೆಗಳ ಪರಿಣಾಮವಾಗಿ ಕುಟುಂಬದಲ್ಲಿ ಸ್ತ್ರೀಗೆ ಇರುವ ಹಕ್ಕನ್ನು ಉತ್ತಮಪಡಿಸಿ, ಕುಟುಂಬದ ಆರ್ಥಿಕಸ್ಥಿತಿಯ ಉತ್ತಮಿಕೆಗೆ ಸ್ತ್ರೀಯೂ ದುಡಿದು, ಕುಟುಂಬದ ಆಸ್ತಿಗೂ ಹಕ್ಕನ್ನು ಪಡೆದು, ಪಿತೃಪ್ರಾಧಾನ್ಯವುಳ್ಳ ಕುಟುಂಬದ ರೀತಿನೀತಿಗಳನ್ನು ಸಡಿಲಗೊಳಿಸಿದ್ದಾಳೆ, ಮಧ್ಯಮವರ್ಗದವರ ಕುಟುಂಬಗಳಲ್ಲೂ ಇದಕ್ಕೂ ಹೆಚ್ಚಿನದಾಗಿ ಕೆಳದರ್ಜೆಯ ಕುಟುಂಬಗಳಲ್ಲಿಯೂ ಈ ತೆರನಾದ ಮಾರ್ಪಾಡು ದಿನೇದಿನೇ ಹೆಚ್ಚಾಗಿ ಕಂಡುಬರುತ್ತಿದೆ.

 ಸಮಾಜದ ಅನುಕೂಲತೆಗೂ ಭದ್ರತೆಗೂ ಆಧಾರವಾದ ತನ್ನ ಪರಾಕ್ರಮವನ್ನೂ ಪುರುಷತ್ವವನ್ನೂ ಹೆಚ್ಚಿಸಿಕೊಳ್ಳಲು ಮಾತೃಪ್ರಧಾನ ಕುಟುಂಬವನ್ನು ಹಿಂದಕ್ಕೆ ತಳ್ಳಿ ಪಿತೃಪ್ರಾಧಾನ್ಯವುಳ್ಳ ಕುಟುಂಬಕ್ಕೆ ಮಾನವ ಉತ್ತೇಜನ ಕೊಟ್ಟುಕೊಂಡುಬಂದಿದ್ದಾನಾದರೂ ಆಧುನಿಕ ಸಮಾಜದಲ್ಲಿ ಪಿತೃಪ್ರಾಧಾನ್ಯವುಳ್ಳ ಕುಟುಂಬ ರೀತಿನೀತಿಗಳೂ ಸರಿಯಾಗಿ ನಿಲ್ಲದೆ ಮಾರ್ಪಾಡಾಗುತ್ತಿರುವುದನ್ನು ನಾವು ಕಾಣಬಹುದು. ಅಂತೂ ಡಾರ್ವಿನ್ ಸ್ಪಷ್ಟಪಡಿಸಿರುವಂತೆ ಸ್ತ್ರೀವರ್ಗ ಅಬಲವೆಂದೂ ಅದು ಕಷ್ಟ ಕಾರ್ಯಗಳನ್ನು ನಿರ್ವಹಿಸಲಾರದೆಂದೂ ಮನೆಯಲ್ಲಿ ನಿಂತು ವಿಶ್ರಾಂತಿ ಪಡೆಯಲು ಅರ್ಹವಾದ ಗುಣವುಳ್ಳದ್ದಾಗಿರುವುದೆಂದೂ ಕಷ್ಟಕಾರ್ಪಣ್ಯಗಳಿಂದ ಅದರ ದೇಹ ಕೃಶವಾಗುವುದೆಂದೂ ಅದರ ಮಾನಸಿಕ ಪ್ರವೃತ್ತಿ ಕಠಿಣಾವಸ್ಥೆಯಲ್ಲಿ ಸ್ಥಿರವಾಗಿ ನಿಲ್ಲಲಾರದೆಂದೂ ಸಮಯಕ್ಕೆ ತಕ್ಕ ಚುರುಕಾದ ನಿರ್ಣಯಗಳನ್ನದು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದೂ ತಿಳಿದಲ್ಲಿ ಪಿತೃಮೂಲ ಕುಟುಂಬ ವ್ಯವಸ್ಥೆಯನ್ನು ಒಪ್ಪಬೇಕಾಗುತ್ತದೆ.

 ಗಂಡು ಹೆಣ್ಣುಗಳ ಸಮ್ಮಿಳನವನ್ನು ಶಾಸ್ತ್ರೋಕ್ತವಾಗಿ ಅಂಗೀಕರಿಸಿ ಸಂತಾನೋತ್ಪತ್ತಿಗೂ ಪುರೋಭಿವೃದ್ಧಿಗೂ ಅವಕಾಶ ಕಲ್ಪಿಸಿಕೊಡುವ ವಿವಾಹವನ್ನು ಆಧಾರವನ್ನಾಗಿಟ್ಟುಕೊಂಡು ಕುಟುಂಬವನ್ನು ವಿವಿಧ ರೀತಿಯಲ್ಲಿ ವಿಂಗಡಿಸುವುದು ವಾಡಿಕೆಯಲ್ಲಿದೆ. ಇವುಗಳಲ್ಲಿ ಏಕಪತ್ನೀ ಕುಟುಂಬ, ಬಹುಪತ್ನೀ ಕುಟುಂಬ ಮತ್ತು ಬಹುಪತಿ ಕುಟುಂಬಗಳು ಮುಖ್ಯವಾದವು. ಏಕಪತ್ನೀ ಕುಟುಂಬದಲ್ಲಿ ಒಬ್ಬ ಗಂಡಸು ಒಬ್ಬ ಹೆಂಗಸನ್ನು ಮದುವೆಯಾಗಿ, ಆಕೆಯೇ ತನ್ನ ಸಹಚರಿ ಸಹಧರ್ಮಚರಿ ಎಂದು ಪರಿಗಣಿಸಿ, ಸಾಯುವ ಪರ್ಯಂತರವೂ ಒಡಗೂಡಿ, ಸಂತಾನವನ್ನು ಪಡೆದು, ಯಾವುದೇ ಪ್ರಬಲ ಕಾರಣಗಳಿದ್ದರೂ ಗಂಡ ಹೆಂಡಿರುಗಳು ಬೇರ್ಪಡದೇ ಸಂಸಾರ ನಡೆಯಿಸಿಕೊಂಡು ಹೋಗುವುದು ಸಂಪ್ರದಾಯ. ಈ ತೆರನಾದ ಕುಟುಂಬ ಪ್ರಾಚೀನ ಮಾನವ ಸಮಾಜದ ಆದಿಯಿಂದಲೂ ಬಹಳ ಪ್ರಬಲವಾದ ಕುಟುಂಬವೆಂದು ಪರಿಗಣಿಸಲ್ಪಟ್ಟಿದೆ. ಅಂಡಮಾನ್ ದ್ವೀಪದ ಆದಿ ಜನಾಂಗವೂ ಸೆಮಾಂಗೆ ಜನರೂ ಇಂಕ ಜನರೂ ಇರಕಾಯರೂ ಹೋಸಿಗಳೂ ಏಕಪತ್ನೀ ಕುಟುಂಬವೇ ಸಮಾಜದ ಭದ್ರತೆಗೆ ಕಾರಣವೆಂದು ಸಾರಿ ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ, ಭಾರತದಲ್ಲಿ ಇಂಥ ಕುಟುಂಬ ಜೀವನವೇ ಪರಮಪವಿತ್ರವೆಂದು ನಂಬಲಾಗಿದೆ. ಪುರಾಣಗಳಲ್ಲಿಯೂ ಇದಕ್ಕೆ ಹೆಚ್ಚಿನ ಪುರಸ್ಕಾರ ದೊರಕಿದೆ. ಪ್ರಪಂಚದ ಬಹುಭಾಗದ ಜನ ಇದೇ ವ್ಯವಸ್ಥೆಯನ್ನು ಒಳ್ಳೆಯದೆಂದು ನಂಬಿ ಜಾರಿಗೆ ತಂದುಕೊಂಡಿದ್ದಾರೆ. ಇಂಥ ಸಂಸಾರಗಳು ಸರ್ವೇಸಾಧಾರಣವಾಗಿ ರೂಢಿಯಲ್ಲಿರಲು ಹಲವಾರು ಕಾರಣಗಳೂ ಇವೆ. ಪ್ರಾಚೀನ ಕಾಲದಲ್ಲಿ ಆರ್ಥಿಕ ದುಃಸ್ಥಿತಿ ಅತಿ ಪ್ರಬಲವಾಗಿದ್ದಿತೆಂದೂ ಒಬ್ಬ ಗಂಡು ಮತ್ತು ಒಬ್ಬ ಹೆಣ್ಣಿನ ಸಂಸಾರಜೀವನ ಬೇರೆ ತೆರನಾದ ಕುಟುಂಬ ಜೀವನಕ್ಕಿಂತ ತೃಪ್ತಿಕರವಾಗಿಯೂ ಸುಲಭವಾಗಿಯೂ ಇತ್ತೆಂದು ಒಂದು ಕಾರಣವನ್ನು ಸೂಚಿಸಲಾಗಿದೆ. ಇದರ ಜೊತೆಗೆ ಏಕಪತ್ನೀ ಕುಟುಂಬ ಲೈಂಗಿಕ ಸ್ವೈರ ವೃತ್ತಿಯನ್ನು ಕಡಿಮೆ ಮಾಡುತ್ತದೆ. ಅನೇಕ ಸಮಾಜಗಳಲ್ಲಿ ಗಂಡು ಹೆಣ್ಣುಗಳ ಸಂಖ್ಯೆ ಸ್ವಲ್ಪ ಹೆಚ್ಚುಕಡಿಮೆ ಒಂದೇ ಸಮಾನಾಗಿರುವುದರಿಂದ ಒಂದು ಗಂಡಿಗೆ ಒಂದು ಹೆಣ್ಣು ಎನ್ನುವ ಸಂಪ್ರದಾಯದ ಕುಟುಂಬವೇ ಶ್ರೇಯಸ್ಕರವೆಂದು ಪರಿಗಣಿಸಲ್ಪಟ್ಟಿದೆ. ಇದೂ ಅಲ್ಲದೆ ಏಕಪತ್ನೀ ಕುಟುಂಬವೇ ಸ್ಥಿರವಾಗಿ ನಿಲ್ಲಬಹುದಾದ ಸಂಸ್ಥೆಯೆಂದೂ ಮಾನವನಿಗೆ ಅನುಭವದಿಂದ ಮನದಟ್ಟಾಗಿದೆ.

 ಬಹುಪತಿ, ಬಹುಪತ್ನೀ ಕುಟುಂಬಗಳ ಪ್ರಕಾರ ಒಬ್ಬ ಗಂಡಸು ಅನೇಕ ಹೆಂಗಸರನ್ನು ಇಲ್ಲವೇ ಅನೇಕ ಹೆಂಗಸರು ಒಬ್ಬ ಗಂಡನನ್ನು ಮದುವೆ ಮಾಡಿಕೊಂಡು ಸಂಸಾರವನ್ನು ಸಾಗಿಸಬಹುದು. ಪ್ರಾಚೀನ ಸಮಾಜದಲ್ಲಿ ಈ ಪದ್ಧತಿಗಳು ಜಾರಿಯಲ್ಲಿದ್ದುವು. ಆರ್ಥಿಕ ಸ್ಥಿತಿ ಉತ್ತಮಗೊಂಡ ಸಂದರ್ಭದಲ್ಲಿ ಮನುಷ್ಯ ಹೆಚ್ಚು ಜನ ಹೆಂಗಸರನ್ನು ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಗೆ ಬಂದಿರಬೇಕು. ಪುರುಷತ್ವವನ್ನು ತೋರ್ಪಡಿಸಲೂ ಆರ್ಥಿಕ ಸ್ಥಿತಿಯ, ಸ್ಥಾನಮಾನಗಳ ಉತ್ತಮಿಕೆಯನ್ನು ಮೆರೆಯಲೂ ಪರಾಕ್ರಮವನ್ನು ವ್ಯಕ್ತಪಡಿಸುವ ಸಲುವಾಗಿಯೂ ಶ್ರೀಮಂತರೂ ಪರಾಕ್ರಮಿಗಳೂ ವೀರರೂ ಶೂರರೂ ಹೆಚ್ಚು ಹೆಚ್ಚು ಹೆಣ್ಣುಗಳನ್ನು ಸೇರಿಸಿಕೊಂಡು ಸಂಸಾರವನ್ನು ನಡೆಸುವ ಪದ್ಧತಿಯನ್ನು ಜಾರಿಗೆ ತಂದರೆಂದು ತೋರುತ್ತದೆ. ರಿವರ್ಸ್ ಹೇಳಿರುವಂತೆ ಇಂಥ ಕುಟುಂಬ ವೀರರಿಗೂ ಶ್ರೀಮಂತರಿಗೂ ಮಾತ್ರ ಸಾಧ್ಯ. ಹಿಂದೂ ಸಮಾಜದಲ್ಲಿಯೂ ಈ ತೆರನಾದ ಕುಟುಂಬಗಳು ಇವೆ. ಆದರೆ ಬಹಳ ವಿರಳ. ಮಹಮ್ಮದೀಯರಲ್ಲಿ ಇಂಥ ಕುಟುಂಬಗಳು ಅತಿಯಾಗಿವೆ. ಹೆಚ್ಚು ಜನರನ್ನು ಮದುವೆಯಾದರೆ ತಮ್ಮ ಕೃಷಿಜೀವನ ಉತ್ತಮಗೊಳ್ಳುವುದೆಂದು ರೈತ ಜನರ ನಂಬಿಕೆ. ಇಂಥ ಸಂದರ್ಭದಲ್ಲಿ ಹೆಂಡತಿಯೇ ಹೆಚ್ಚಿನ ಜನರನ್ನು ಮದುವೆಯಾಗಲು ತನ್ನ ಗಂಡನನ್ನು ಪ್ರೇರೇಪಿಸುತ್ತಾಳೆ. ಈ ಕಾರಣಗಳಲ್ಲದೆ ಕೆಲವು ಗುಂಪುಗಳಲ್ಲಿ ಗಂಡಸರ ಸಂಖ್ಯೆಗಿಂತ ಹೆಂಗಸರ ಸಂಖ್ಯೆಯೇ ಹೆಚ್ಚಾಗಿರುವ ಪ್ರಮೇಯಗಳು ಬರುತ್ತವೆ. ಹಲವು ಬಾರಿ ಶತ್ರುಗಳು ಗಂಡಸರನ್ನೆಲ್ಲ ಕೊಂದು ಹೆಚ್ಚು ಜನ ಹೆಂಗಸರಿರುವ ಗುಂಪುಗಳನ್ನು ಸೆರೆಹಿಡಿದು ಆ ಹೆಂಗಸರನ್ನೆಲ್ಲ ಮದುವೆಯಾಗಿ ತಮ್ಮ ಗುಂಪಿನ ಪ್ರಾಬಲ್ಯವನ್ನು ಉತ್ತಮಗೊಳಿಸಿಕೊಳ್ಳವ ಸಂದರ್ಭದಲ್ಲಿಯೂ ಬಹುಪತ್ನೀ ಕುಟುಂಬಗಳು ಹೆಚ್ಚುವ ಸಂಭವವಿತ್ತು. ಇದಕ್ಕೂ ಮಿಗಿಲಾಗಿ ಮನಶ್ಯಾಸ್ತ್ರಜ್ಞರ ಪ್ರಕಾರ ಗಂಡಸು ಹೆಚ್ಚು ಹೆಂಗಸರೊಡಗೂಡಿ ಸಂಸಾರ ಮಾಡುವುದು ಅವನಿಗೆ ಹೆಚ್ಚಿನ ಲೈಂಗಿಕ ತೃಪ್ತಿಯನ್ನುಂಟುಮಾಡುವುದೆಂಬುದೂ ಅದಕ್ಕಾಗಿಯೇ ಅವನು ಬಹುಪತ್ನೀ ಕುಟುಂಬಗಳನ್ನು ಕಟ್ಟಿದ್ದಾನೆಂಬುದೂ ದೃಢಪಟ್ಟ ಸಂಗತಿಯಾಗಿದೆ. ಇದರ ಜೊತೆಗೆ ಗಂಡು ಸಂತಾನವಾಗಬೇಕೆಂಬ ಆಕಾಂಕ್ಷೆಯಿಂದಲೂ ಹೆಚ್ಚು ಜನ ಸ್ತ್ರೀಯರನ್ನು ಮದುವೆಯಾಗುವ ಪದ್ಧತಿಯಿದೆ. ಏನೇ ಇರಲಿ, ಬಹುಪತ್ನೀ ಕುಟುಂಬಗಳಲ್ಲಿ ಸಂಸಾರಸುಖ ಕಡಿಮೆಯೆಂದೇ ಹೇಳಬಹುದು. ಹೆಂಗಸರ ವ್ಯಾಜ್ಯಗಳು ಅತಿಯಾಗಿರುತ್ತವೆ.

 ಮೇಲ್ಕಂಡ ಕುಟುಂಬಗಳ ಜೊತೆಗೆ ಬಹುಪತಿ ಕುಟುಂಬಗಳೂ ಇವೆ. ಆದರೆ ಇವುಗಳ ಸಂಖ್ಯೆ ಬಹಳ ಅಪೂರ್ವ. ಈ ಕುಟುಂಬ ರಚನೆಯ ಪ್ರಕಾರ ಒಬ್ಬ ಹೆಂಗಸು ಅನೇಕ ಗಂಡಸರನ್ನು ಮದುವೆ ಮಾಡಿಕೊಳ್ಳುವಳು. ಗಂಡಸರು ಅಭಾವವಾಗಿರುವ ಗುಂಪುಗಳಲ್ಲಿ ಮಾತ್ರ ಈ ತೆರನಾದ ಕುಟುಂಬ ರಚನೆ ಇರಲು ಸಾಧ್ಯವೆಂದು ಊಹಿಸಬಹುದು. ಆರ್ಥಿಕ ಮುಗ್ಗಟ್ಟಿನಿಂದಾಗಿ ಹೆಂಡತಿಯನ್ನು ಸಾಕಲು ಬಹುಕಷ್ಟವಾದ ಸಂದರ್ಭದಲ್ಲಿ ಇಂಥ ಕುಟುಂಬದ ಅವಶ್ಯಕತೆ ಕಂಡುಬರುತ್ತದೆ. ಇಂಥ ವ್ಯವಸ್ಥೆಯನ್ನು ಟಿಬೆಟ್ಟಿನಲ್ಲಿಯ ಹಲವಾರು ಗುಂಪುಗಳಲ್ಲಿಯೂ ಎಸ್ಕಿಮೋ ಜನರಲ್ಲಿಯೂ ಹೆಚ್ಚಾಗಿ ಕಾಣಬಹುದು. ಹಿಮಾಲಯ ಪರ್ವತದ ಹಲವಾರು ಗುಂಪುಗಳಲ್ಲಿಯೂ ಈ ಪದ್ಧತಿ ರೂಢಿಯಲ್ಲಿತ್ತು ಈಗೀಗ ಕಡಿಮೆಯಾಗುತ್ತಿದೆ. ಮೆಕ್‍ಲೆನನ ವರದಿಯ ಪ್ರಕಾರ ಕೇರಳದ ನಾಯರ್ ಜನಾಂಗದಲ್ಲಿಯೂ ಈ ಪದ್ಧತಿ ಇತ್ತೆಂದು ತಿಳಿದಿದೆ. ಎಲ್.ಕೆ.ಎ ಅಯ್ಯರ್ ಕಣ್ಣನ್ ನಾಯರ್ ಇವರು ಕೆಲವು ಉದಾಹರಣೆಗಳನ್ನು ಕೊಟ್ಟು ನಾಯರ್ ಜನಾಂಗದಲ್ಲಿ ಈ ತರಹೆಯ ಕುಟುಂಬಗಳಿದ್ದುವೆಂದು ಸೂಚಿಸಿದ್ದಾರೆ. ಅದರಲ್ಲೂ ಕೇರಳದ ನಂಬೂದರಿಗಳಲ್ಲಿ ಈ ಪದ್ಧತಿ ವಿಶೇಷವಾಗಿ ರೂಢಿಯಲ್ಲಿತ್ತು. ನಂಬೂದರಿಗಳಲ್ಲಿ ದೊಡ್ಡಣ್ಣ ತನ್ನ ಜಾತಿಯವರನ್ನು ಮದುವೆಯಾಗುತ್ತಾನೆ. ಆತನ ತಮ್ಮಂದಿರು ನಾಯರರ ಹೆಂಗಸರೊಡನೆ ಸಂಬಂಧ ಬೆಳಸುತ್ತಾರೆ. ಇದರಿಂದ ನಂಬೂದರಿಗಳ ಹೆಂಗಸರು ಹೆಚ್ಚಿ ಬಹುಪತ್ನಿತ್ವ ಹೆಚ್ಚಿತ್ತು. ಹೀಗೆಯೇ ನಾಯರರ ಹೆಂಗಸರು ಕಡಿಮೆಯಾಗಿ ನಾಯರರ ಗಂಡಸರು ಬಹುಪತ್ನಿತ್ವವನ್ನು ಅವಲಂಬಿಸುತ್ತಿದ್ದರು. ಆದರೆ ಇದು ಈಗೀಗ ಕಡಿಮೆ 
ಆಗುತ್ತಿದೆ. ಇಂಥ ಕುಟುಂಬಗಳು ನೀಲಗಿರಿಯ ತೋಡರಲ್ಲಿಯೂ ಆಚರಣೆಯಲ್ಲಿದ್ದುವು. ಕೊಡಗಿನಲ್ಲಿಯೂ ಈ ತೆರನಾದ ಕುಟುಂಬಗಳಿದ್ದುವೆನ್ನುವುದಕ್ಕೆ ಆಧಾರಗಳಿವೆ.

 ಇನ್ನೊಂದು ಬಗೆ ಅವಿಭಕ್ತ ಕುಟುಂಬ. ಇಲ್ಲಿ ಗಂಡಸಿಗೇ ಹೆಚ್ಚು ಪ್ರಾಧಾನ್ಯ. ಪಿತೃವೇ ಆ ಕುಟುಂಬಕ್ಕೆ ಯಜಮಾನ. ಹುಟ್ಟಿದ ಮಕ್ಕಳಲ್ಲಿ ಗಂಡುಮಗುವಿಗೇ ಹೆಚ್ಚಿನ ಪುರಸ್ಕಾರ ಸಿಕ್ಕುತ್ತದೆ. ಹೆಣ್ಣು ಮಕ್ಕಳು ದೊಡ್ಡವರಾದ ಮೇಲೆ ಅವಿಭಕ್ತ ಕುಟುಂಬವನ್ನು ಬಿಟ್ಟು ಗಂಡನ ಮನೆಯನ್ನು ಸೇರುವುದು ವಾಡಿಕೆ. ಉಳಿದ ಕಡೆಗಳಲ್ಲಿರುವಂತೆ ಗಂಡುಮಕ್ಕಳು ಮದುವೆಯಾದ ಮೇಲೂ ಬೇರೆ ಬಾಳದೆ ಮೂಲ ಸಂಸಾರದ ಸದಸ್ಯರಾಗಿಯೇ ಉಳಿಯುತ್ತಾರೆ. ಎಲ್ಲ ಗಂಡುಮಕ್ಕಳೂ ಒಂದೇ ಮನೆಯಲ್ಲಿದ್ದುಕೊಂಡು, ಒಂದೇ ಅಡಿಗೆಯ ಮನೆಯಲ್ಲಿ ತಯಾರಾದ ಊಟವನ್ನು ಒಟ್ಟಿಗೆ ಉಂಡು ಒಟ್ಟಿಗೆ ಬಾಳುತ್ತಾರೆ. ಕಷ್ಟ ನಷ್ಟ ಸುಖದುಃಖಗಳಲ್ಲಿ ಮನೆಯವರೆಲ್ಲರೂ ಭಾಗಿಗಳಾಗಿ, ಸಂಸಾರವನ್ನು ಸಾಗಿಸುತ್ತಾರೆ. ಜನ್ಯಸಂಸ್ಕಾರ, ಅತಿಥಿಸತ್ಕಾರ, ಶವಸಂಸ್ಕಾರಗಳನ್ನೂ ಒಟ್ಟಿಗೆ ನಿರ್ವಹಿಸಿಕೊಂಡು. ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಎಲ್ಲರೂ ಭಾಗಿಗಳಾಗಿರುತ್ತಾರೆ. ಆಸ್ತಿಪಾಸ್ತಿಗಳ ಹಕ್ಕೆಲ್ಲವೂ ಗಂಡು ಮಕ್ಕಳಿಗೇ ಸೇರಿರುತ್ತದೆ. ಆಸ್ತಿಯನ್ನು ಸಂಪಾದಿಸುವ ಹಕ್ಕು ಎಲ್ಲರಿಗೂ ಇದ್ದು, ಅದರ ಆಗುಹೋಗುಗಳನ್ನೂ ಆಸ್ತಿಯನ್ನು ಹೆಚ್ಚಿಸಿಕೊಳ್ಳುವ ಅಧಿಕಾರವನ್ನೂ ವರಮಾನವನ್ನು ಖರ್ಚುಮಾಡುವ ಅಧಿಕಾರವನ್ನೂ ಅವಿಭಕ್ತ ಕುಟುಂಬದ ಯಜಮಾನನೇ ಹೊತ್ತಿರುತ್ತಾನೆ. ಯಜಮಾನನಾದರೋ ಎಲ್ಲರ ಮನಸ್ಸನ್ನರಿತು, ಅವರವರಿಗೆ ಬೇಕಾದ ಸೌಲಭ್ಯಗಳನ್ನೊದಗಿಸಿಕೊಂಡು, ಅವರ ಶ್ರೇಯಸ್ಸನ್ನೇ ಸದಾ ಗಮನದಲ್ಲಿಟ್ಟುಕೊಂಡು ಅವಿಭಕ್ತ ಕುಟುಂಬದ ಏಳಿಗೆಗೇ ದುಡಿದು, ಕುಟುಂಬದ ಜನರೆಲ್ಲರಿಗೂ ಪ್ರೀತಿಪಾತ್ರನಾಗಲು ಪ್ರಯತ್ನಪಡುತ್ತಾನೆ. ಈ ಬಗೆಯ ಕುಟುಂಬಗಳು ಬಹುಕಾಲದಿಂದಲೂ ಮಾನವ ಸಮಾಜದಲ್ಲಿದ್ದುವು. ಗ್ರೀಸ್ ದೇಶದಲ್ಲಿಯೂ ಇಂಗ್ಲೆಂಡ್ ಮತ್ತು ಇತರ ಐರೋಪ್ಯ ದೇಶಗಳಲ್ಲಿಯೂ ಇಂಥ ಕುಟುಂಬಗಳಿದ್ದುವೆನ್ನುವುದಕ್ಕೆ ನಿದರ್ಶನಗಳಿವೆ. ಯಂತ್ರಯುಗದ ಪ್ರಭಾವದಿಂದ ವ್ಯಕ್ತಿ ಸ್ವಾತಂತ್ರ್ಯಪ್ರಿಯನಾಗಿ, ಅವಿಭಕ್ತ ಕುಟುಂಬದಲ್ಲಿರಲು ಒಪ್ಪದೆ ಹೋದಾಗ, ಅದು ಸಾಧ್ಯವಾಗದಂಥ ಪರಿಸ್ಥಿತಿ ಉದ್ಭವಿಸಿದಾಗ, ಸಂಕೀರ್ಣ ನಗರಜೀವನ ಬೆಳೆದ ಮೇಲೆ, ಅವಿಭಕ್ತ ಕುಟುಂಬಗಳ ಪ್ರಾಧಾನ್ಯ ಕಡಿಮೆಯಾಗುತ್ತ ಬಂದಿದೆ. ಭಾರತದಲ್ಲೂ ಹೀಗಾಗುತ್ತಿರುವುದನ್ನು ಗಮನಿಸಬಹುದು.

 ಆಸ್ತಿಯ ಹಕ್ಕು ಸಾಮಾನ್ಯವಾಗಿ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಗಂಡು ಸಂತತಿಗೆ ಇರುತ್ತದೆ. ಇವರು ಒಟ್ಟು ಕುಟುಂಬದ ಆಸ್ತಿಗೆ ಹಕ್ಕುದಾರರಾಗಿರುತ್ತಾರೆ. ತಂದೆ, ಮುತ್ತಾತಂದಿರಿಂದ ನಡೆದುಬಂದ ಆಸ್ತಿಯಲ್ಲಿಯೂ ಇವರಿಗೆ ಅಧಿಕಾರವಿರುತ್ತದೆ. ಆದರೆ ಪುತ್ರಿ ಸಮಭಾಗವನ್ನು ಪಡೆಯಲು ಅನರ್ಹಳು. ಸ್ತ್ರೀಧನವಾಗಿ ಬಂದ ಆಸ್ತಿಗೆ ಮಾತ್ರ ಆಕೆ ಹಕ್ಕುದಾರಳು. ಗಂಡ ಸಕಲೈಶ್ವರ್ಯವಂತನಾಗಿ ದುಡಿದು ಸಂಪಾದಿಸಿದರೂ ಅದರಲ್ಲಿ ಪತ್ನಿಗೆ ಹಕ್ಕಿರುವುದಿಲ್ಲ. ಆಕೆಗೆ ಕೇವಲ ಜೀವನಾಂಶಕ್ಕೆ ಹಕ್ಕುಂಟು. ತಂದೆಯ ಮರಣಾನಂತರ ಆಸ್ತಿಯ ಹಕ್ಕೆಲ್ಲವೂ ಮಗನಿಗೇ ಸೇರುತ್ತದೆ. ಇದು ಭಾರತದ ಮಿತಾಕ್ಷರ ನ್ಯಾಯದ ವಿಧಿಗಳು.

 ಆಧುನಿಕ ಕಾಲದಲ್ಲಿ ವ್ಯಕ್ತಿಗೇ ಸ್ವಾತಂತ್ರ್ಯ ಹೆಚ್ಚಾಗಿರುವುದರಿಂದ ತನ್ನ ಸ್ವಂತ ಶ್ರಮದಿಂದ ಗಳಿಸಿದ ಆಸ್ತಿಗೆ ತಾನೇ ಹಕ್ಕುದಾರನಾಗುತ್ತಾನೆ. ಇದಕ್ಕೆ ಸ್ವಯಾರ್ಜಿತ ಆಸ್ತಿಯೆಂದು ಹೆಸರು. ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಅವಿಭಕ್ತ ಕುಟುಂಬದ ಸದಸ್ಯರಿಗೆ ಹಕ್ಕು ಇರುವುದಿಲ್ಲ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬದಿಂದ ಸ್ವಲ್ಪ ಸಹಾಯ ಪಡೆದು ಒಬ್ಬ ವ್ಯಕ್ತಿ ಆಸ್ತಿ ಮಾಡಿದ್ದರೂ ಅಂತಹ ಆಸ್ತಿಯಲ್ಲಿ ಇತರ ಅವಿಭಕ್ತ ಕುಟುಂಬದ ಸದಸ್ಯರಿಗೂ ಹಕ್ಕು ಇತ್ತು. ಇಂಥ ತೊಡರುಗಳು ಈಗ ಇಲ್ಲ. ಅವಿಭಕ್ತ ಕುಟುಂಬದಿಂದ ಸಹಾಯ ಪಡೆದು ವ್ಯಕ್ತಿ ಆಸ್ತಿ ಸಂಪಾದನೆ ಮಾಡಿದ್ದರೂ ಅಂಥ ಆಸ್ತಿ ಆ ವ್ಯಕ್ತಿಗೆ ಸೇರಿದ್ದೆಂದು ಕಾನೂನು ಹೇಳುತ್ತದೆ. ಇದರಿಂದ ವ್ಯಕ್ತಿಗೆ ಸ್ವಾತಂತ್ರ್ಯ ಹೆಚ್ಚಿ ವ್ಯಕ್ತಿಯ ಮನೋಭಾವವೂ ಮಾರ್ಪಾಟಾಗಲವಕಾಶವಾಗಿದೆ. ಕುಟುಂಬದ ಆಸ್ತಿಯಲ್ಲಿ ಹೆಂಗಸಿಗೂ ಭಾಗ ಲಭ್ಯವಾಗುವಂತೆ ಭಾರತದಲ್ಲಿ ಈಚೆಗೆ ಕಾನೂನು ಜಾರಿಗೆ ಬಂದಿದೆ.

 ಅವಿಭಕ್ತ ಕುಟುಂಬ ತನಗೆ ಸೇರಿದ ಎಲ್ಲ ವ್ಯಕ್ತಿಗಳ ರಕ್ಷಣೆಯ ಹೊಣೆಯನ್ನೂ ತಾನೇ ಹೊತ್ತು ಅದನ್ನು ಅತಿ ಸಾಂಗವಾಗಿ ನೆರವೇರಿಸಿಕೊಂಡು ಬರುತ್ತಿತ್ತು. ಶಕ್ತಿಯೇ ಪ್ರಬಲ, ಅದೇ ಕಾಯಿದೆ ಕಟ್ಟಳೆಗಳ ಮೂಲ-ಎಂಬ ಸಂದರ್ಭದಲ್ಲಂತೂ ಅವಿಭಕ್ತ ಕುಟುಂಬ ತನ್ನ ಕುಟುಂಬದ ಜನರನ್ನೂ ಕುಟುಂಬದ ಜನರು ಸಂಪಾದಿಸಿದ ಆಸ್ತಿಯನ್ನು ಸುಭದ್ರವಾಗಿ ಕಾಪಾಡಿಕೊಂಡು ಬರಲು ಸಹಾಯಕವಾಗಿದ್ದು ಪ್ರಮುಖ ಪಾತ್ರ ವಹಿಸುತ್ತಿತ್ತು.

 ವಂಶಪಾರಂಪರ್ಯವಾಗಿ ಸಂಪಾದಿಸಿದ ಆಸ್ತಿ ಬೇಜವಾಬ್ದಾರಿಯಿಂದ ಪೋಲಾಗದಂತೆಯೂ ವಿವೇಕಿಗಳಲ್ಲದ ಯುವಕರು ಅಂಥ ಆಸ್ತಿಯನ್ನು ಹಾಳುಮಾಡದಂತೆಯೂ ಅಂಥ ಆಸ್ತಿಯಿಂದ ಪುತ್ರ, ಪುತ್ರಿ, ಕಳತ್ರರೆಲ್ಲರು ಸುಖಪಡುವಂತೆ ಚಿರಕಾಲ ಅದನ್ನು ಕಾಪಾಡಿಕೊಂಡು ಬರುವಂತೆಯೂ ಮನೆಯ ಯಜಮಾನ ದಕ್ಷತೆಯಿಂದ ನೋಡಿಕೊಳ್ಳುವವರೆಗೆ ಅವಿಭಕ್ತ ಕುಟುಂಬ ಪ್ರಯೋಜನಕಾರಿಯಾಗಿತ್ತು.

 ಆದರೆ ಅವಿಭಕ್ತ ಕುಟುಂಬ ತನ್ನದೇ ಆದ ಒಂದು ತರಹೆಯ ಸಂಸ್ಕøತಿಯನ್ನು ಬೆಳೆಯಿಸಿಕೊಂಡು ಬಂದಿದ್ದರಿಂದಲೂ ಯಜಮಾನನಿಗೇ ಹೆಚ್ಚಿನ ಹಕ್ಕನ್ನು ಕೊಟ್ಟಿದ್ದರಿಂದಲೂ ಉಳಿದ ಸದಸ್ಯರಲ್ಲಿ ಬುದ್ಧಿವಂತರಾದವರಿಗೂ ಚಟುವಟಿಕೆಯಿಂದಿದ್ದ ಇತರ ಯುವಕರಿಗೂ ಸ್ವಾತಂತ್ರ್ಯವಿಲ್ಲದಿದ್ದುದರಿಂದಲೂ ಅನೇಕ ಎಡರು ತೊಡರುಗಳಿಗೆ ಕಾರಣವಾಯಿತು; ಕಿರಿಯರು ಅಜಾಗರೂಕರಾಗಲೂ ಸೋಮಾರಿಗಳಾಗಿ ಜೀವನ ಮಾಡಲೂ ಅವಕಾಶವಿತ್ತಿತು.

 ಆಧುನಿಕ ಕಾಲದಲ್ಲಿ ಇತರ ಸಂಸ್ಥೆಗಳು ಬದಲಾವಣೆ ಹೊಂದುತ್ತಿರುವಂತೆ ಕುಟುಂಬ ಸಂಸ್ಥೆಯೂ ಮಾರ್ಪಾಟಾಗುತ್ತಿದೆ. ಇದರಿಂದ ಕುಟುಂಬ ವ್ಯವಸ್ಥೆ ಒಂದು ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದೆ. ಅದರ ರಚನೆಯೂ ಕಾರ್ಯಚಟುವಟಿಕೆಗಳೂ ರೀತಿನೀತಿಗಳೂ ಸದಸ್ಯರಿಗಿದ್ದ ಸಂಬಂಧಗಳೂ ಮಿಗಿಲಾಗಿ ಧ್ಯೇಯಗಳೂ ಮಾರ್ಪಾಡಾಗುತ್ತಿವೆ. ಯಂತ್ರ ಯುಗದಿಂದಾಗಿರುವ ಆರ್ಥಿಕ ಕ್ರಾಂತಿಯೂ ನವೀನ ರೀತಿಯ ಜೀವನ ವ್ಯವಸ್ಥೆಯೂ ಕೈಗಾರಿಕಾ ಸಂಸ್ಕøತಿಯೂ ಪಿತೃಪ್ರಾಧಾನ್ಯವಿದ್ದ ಕುಟುಂಬದಲ್ಲಿ ವ್ಯತ್ಯಾಸಗಳನ್ನು ಕಲ್ಪಿಸಿ, ಕುಟುಂಬ ಜೀವನದಲ್ಲಿಯೇ ಕ್ರಾಂತಿಯನ್ನುಂಟು ಮಾಡಿವೆ. ಕುಟುಂಬದಲ್ಲಿನ ಹಳೆಯ ಪದ್ದತಿಗಳು ಸಡಿಲವಾಗಿ, ಕ್ರಾಂತಿಕಾರಕ ಆರ್ಥಿಕ ಮತ್ತು ಆಡಳಿತ ಪ್ರಭಾವ ಕುಟುಂಬದ ಮೇಲೆ ಬಿದ್ದು, ಹಲವಾರು ಶತಮಾನಗಳಿಂದ ನಡೆದು ಬಂದ ಕುಟುಂಬ ಪದ್ಧತಿಗಳು ಮಾರ್ಪಡುತ್ತಿವೆ. ಈ ಕ್ರಾಂತಿಕಾರಕ ಸನ್ನಿವೇಶಗಳು ಹೆಂಗಸರಿಗೂ ಗಂಡಸರಿಗೂ ಕುಟುಂಬದಲ್ಲಿದ್ದ ಸಾಮರಸ್ಯವನ್ನು ಕಡಿಮೆ ಮಾಡಿದುವೆಂದರು ತಪ್ಪಾಗಲಾರದು. ಜೊತೆಗೆ ಪ್ರಾಚೀನ ಕುಟುಂಬದಲ್ಲಿಯ ಅನೇಕ ಹೊಣೆಗಳನ್ನು ಸಮಾಜ ಮತ್ತು ಸರ್ಕಾರ ಹೊರುತ್ತಿದೆಯಾಗಿ, ತಾಯಿ ತಂದೆಗಳೇ ನಿರ್ವಹಿಸಬೇಕಾಗಿದ್ದ ವಿದ್ಯೆ. ಮದುವೆ ಮುಂಜಿಗಳ ಹೊಣೆಯೂ ಕಾಲಕ್ರಮೇಣ ಕಡಿಮೆಯಾಗುತ್ತಿದೆ. ನಗರಗಳ ಸಂಪರ್ಕದಿಂದ ಹೆಂಗಸೂ ಕಲಿತು, ಸಾರ್ವಜನಿಕ ಜೀವನಕ್ಕಿಳಿದು ಉದ್ಯೋಗ ಸಂಪಾದಿಸಿ, ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿಕೊಂಡು ಸ್ಥಾನಮಾನಗಳಲ್ಲಿ ಗಂಡಸಿನ ಎತ್ತರಕ್ಕೆ ಏರುತ್ತಿದ್ದಾಳೆ. ಹೀಗಾಗಿ ನವೀನ ಕುಟುಂಬ ಪಿತೃಪ್ರಧಾನವೂ ಅಲ್ಲ, ಮಾತೃಪ್ರಧಾನವೂ ಅಲ್ಲ, ಉಭಯಪ್ರಧಾನವಾಗುತ್ತಿದೆ.

 ಅಲ್ಲದೆ ಮದುವೆ, ತಂದೆತಾಯಿಗಳ ಕರ್ತವ್ಯ. ಮಕ್ಕಳು, ಅವರ ಪಾಲನೆ ಇತ್ಯಾದಿ ವಿಷಯಗಳಲ್ಲೂ ಕ್ರಾಂತಿಕಾರಿ ಬದಲಾವಣೆಗಳಾಗಿದೆ. ಅವ್ಯವಸ್ಥಿತ ಲೈಂಗಿಕಜೀವನ ಕುಟುಂಬದ ಪ್ರಾಧಾನ್ಯವನ್ನು ಮತ್ತಷ್ಟು ಕುಗ್ಗಿಸಿದೆ. ಮದುವೆಗಳಿಗೆ ಮೊದಲೇ ಗಂಡು ಹೆಣ್ಣುಗಳು ಲೈಂಗಿಕ ಜೀವನದ ಅನುಭವವನ್ನು ಪಡೆಯುವುದು ಹೆಚ್ಚಾಗಿ ಪ್ರೇಮಿಸಿ ಮದುವೆಯಾಗುವುದು ಹೆಚ್ಚುತ್ತಿದೆ. ಹಾಗೆಯೇ ಮಾನಸಿಕ ಉಲ್ಬಣಗಳಿಂದಾಗಿ ವಿಚ್ಛೇದಗಳೂ ಹೆಚ್ಚುತ್ತಿವೆ.

 ಈ ಕಾರಣಗಳಿಂದ ಕುಟುಂಬದ ರಚನೆಯಲ್ಲಿಯೂ ಅದರ ದಿನಚರಿಯ ಕರ್ತವ್ಯಗಳಲ್ಲಿಯೂ ಅದರ ಮೌಲ್ಯಗಳಲ್ಲಿಯೂ ಅತ್ಯಧಿಕ ಮಾರ್ಪಾಟುಗಳಾಗಿ ಕುಟುಂಬದ ರೀತಿನೀತಿಯೇ ಇಂದಿನ ದಿವಸ ಬದಲಾಗಿದೆ, ಆಧುನಿಕ ಸಂಸಾರ ಕೆಳಗೆ ಕಂಡ ಮೂರು ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ ನ್ಯಾಯವಾದ ಲೈಂಗಿಕ ಜೀವನಕ್ಕೆ ಅವಕಾಶವನ್ನು ಕಲ್ಪಿಸಿಕೊಡುವುದು. ಎರಡನೆಯದಾಗಿ ಮಕ್ಕಳನ್ನು ಪಡೆದು ಅವುಗಳ ಪುರೋಭಿವೃದ್ಧಿಗೆ ತಾಯಿತಂದೆಗಳು ಶ್ರಮಿಸುವುದು, ಮತ್ತು ಮೂರನೆಯದಾಗಿ ಕುಟುಂಬವೇ ಸಮಾಜಕ್ಕೆ ಆಧಾರಸ್ಥಂಭವಾಗಿ, ಸಮಾಜದ ಚಟುವಟಿಕೆಗಳಿಗೆ ಮೇಲ್ಪಂಕ್ತಿಯಾಗಿರುವುದು. ಈ ಕಾರಣಗಳಿಂದ ಆಧುನಿಕ ಕುಟುಂಬ ಹೆಚ್ಚಿನ ಬದಲಾವಣೆಗೊಳಗಾಗುತ್ತಿದೆ. ಈ ಬದಲಾವಣೆಗಳನ್ನು ಕುರಿತು ಆಗ್‍ಬರ್ನ್ ಕಿಂಗ್ಸ್ಲೆ ಡೇವಿಸ್ ಜಿóಮ್ಮರ್ ಮನ್, ಕಪಾಡಿಯಾ, ಇರಾವತಿ ಕರ್ವೆ, ಸಾರೊಕಿನ್, ಆಟಿಸ್ ಡಡ್ಲಿ ಡಂಕನ್, ಆರ್ನಾಲ್ಡ್ ರೋಜ್, ಅಂಡರ್ ಸನ್ ಮೊದಲಾದ ಸಮಾಜಶಾಸ್ತ್ರಜ್ಞರು ಬದಲಾಗುತ್ತಿರುವ ಸಮಾಜದಲ್ಲಿ ಕುಟುಂಬದ ಸ್ಥಾನವನ್ನೂ ಅದರ ಮುಂದಿನ ಪಾತ್ರವನ್ನೂ ವಿವೇಚಿಸಲು ಪ್ರಯತ್ನಿಸಿದ್ದಾರೆ.

 ಕುಟುಂಬ ವ್ಯವಸ್ಥೆಗೆ ಆಧುನಿಕ ಯುಗದಲ್ಲೂ ಸಾಕಷ್ಟು ಪ್ರಾಧಾನ್ಯವಿದೆಯೆಂಬುದು ತಜ್ಞರ ಮತ. ಅದು ಮಿಕ್ಕೆಲ್ಲ ಸಾಮಾಜಿಕ ವ್ಯವಸ್ಥೆಗಳ ಅಡಿಗಲ್ಲು. ಅದು ಚಿಕ್ಕದಾಗಿ ಚೊಕ್ಕವಾಗಿ ಇದ್ದಲ್ಲಿ ಅದರ ಸದಸ್ಯರೆಲ್ಲರ ಶ್ರೇಯೋಭಿವೃದ್ಧಿಯೂ ತನ್ಮೂಲಕ ಇಡೀ ದೇಶದ ಪ್ರಗತಿಯೂ ಉಂಟಾಗುತ್ತವೆ. ಅದರ ಕಟ್ಟುಪಾಡನ್ನು ಸಡಿಲಿಸಿದಲ್ಲಿ ಅಥವಾ ಅದನ್ನು ನಿರಾಕರಿಸಿದಲ್ಲಿ ಮನುಷ್ಯನ ಬಾಳು ಗೊಂದಲಕ್ಕೊಳಗಾಗುತ್ತದೆ. ಮನುಷ್ಯನ ಸ್ವಾರ್ಥ, ವೈಯಕ್ತಿಕ ಏರುಪೇರುಗಳು, ದುರಭಿಲಾಷೆಗಳು- ಇವೆಲ್ಲ ಹದಗೊಂಡು ಪ್ರೇಮ, ನಿಃಸ್ವಾರ್ಥತೆ, ಸ್ನೇಹ, ಪರೋಪಕಾರಬುದ್ಧಿ, ನಯ, ಸಂಸ್ಕøತಿ ಇವೆಲ್ಲ ಬೆಳೆಯಲು ಕುಟುಂಬ ವ್ಯವಸ್ಥೆ ಅಗತ್ಯ. ಅದರ ಒಳರಚನೆ ಎಷ್ಟೇ ಮಾರ್ಪಾಟಾಗಲಿ, ಅದರ ಉದ್ದೇಶ ಮಾತ್ರ ಎಂದಿನಂತೆಯೇ ನಡೆದುಬಂದಿದೆ. ಅದರ ಅಡಿಪಾಯವನ್ನು ನಲುಗಿದಲ್ಲಿ ಇಡೀ ಸಮಾಜ ಜರ್ಝರಿತವಾಗುತ್ತದೆ. ಅದನ್ನು ಉಳಿಸಿಕೊಂಡು ಬರುವುದೇ ಮಾನವ ಕುಲಕ್ಕೆ ಶ್ರೇಯಸ್ಕರವೆಂಬುದು ತಜ್ಞರ ಅಭಿಪ್ರಾಯ.

 

 (ಕೆ.ಎನ್.ವಿ.; ಯು.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ